'ಟೆಕ್ ಬುಕ್!' ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Friday, May 6, 2016

ವಿಜಯ ಕರ್ನಾಟಕದಲ್ಲಿ ಟೆಕ್ ಬುಕ್!

ತಂತ್ರಜ್ಞಾನ ಜಗತ್ತಿನಲ್ಲಿ ಬದಲಾವಣೆಗಳು ದಿಢೀರ್‌ ಅಂತ ಬಂದು, ಅಷ್ಟೇ ಕ್ಷಿಪ್ರವಾಗಿ ಹೊಸದೊಂದು ಪರಿವರ್ತನೆಗೆ ತೆರೆದುಕೊಳ್ಳುತ್ತವೆ. ಇದು ನವೀನತೆಯ ಯುಗ. ಇಂದಿನ ತಂತ್ರಜ್ಞಾನ, ನಾಳೆಗೆ ಹಳೆಯದು ಅಂತನ್ನಿಸಿಬಿಡುವಷ್ಟು ವೇಗವಾಗಿ ಬದಲಾಗುವ ಕಾಲ. ಅಂಥದ್ದರಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಕಾಲೀನ ಬೆಳವಣಿಗೆಗಳ ಬಗ್ಗೆ ತಿಳಿಸಿಕೊಡುತ್ತಾ ವಿಜಯ ಕರ್ನಾಟಕ ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನಗಳ ಮೂಲಕ ಓದುಗರಿಗೆ ಪರಿಚಿತರಾಗಿರುವವರು ಟಿ.ಜಿ.ಶ್ರೀನಿಧಿ. ಸರಳ ಕನ್ನಡದಲ್ಲಿ ತಂತ್ರಜ್ಞಾನದ ಮಾಹಿತಿಯಿರುವ ಅವರ ejnana.com ತಾಣವು ಹತ್ತನೇ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ, ಮುಂದಿನ ಭಾನುವಾರ (8 ಮೇ 2016) 'ಇ-ಜ್ಞಾನ ದಿನ' ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ತಂತ್ರಜ್ಞಾನದ ಈಗಿನ ಬೆಳವಣಿಗೆಗಳ ಬಗ್ಗೆ ಮತ್ತು ಪ್ರಸ್ತುತ ಇರುವ ಕುತೂಹಲಗಳ ಮೇಲೆ ಬೆಳಕು ಚೆಲ್ಲುವ ಅವರ 13ನೇ ಪುಸ್ತಕ ಲೋಕಾರ್ಪಣೆಗೊಳ್ಳುತ್ತಿದೆ.

'ತಂತ್ರಜ್ಞಾನ ಲೋಕದಲ್ಲಿ ಒಂದು ಸುತ್ತು' ಎಂಬ ಟ್ಯಾಗ್‌ಲೈನ್‌ ಇರುವ 'ಟೆಕ್ಸ್ಟ್‌ ಬುಕ್‌ ಅಲ್ಲ, ಇದು ಟೆಕ್‌ ಬುಕ್‌!' ಎಂಬ ಪುಸ್ತಕವು ಕನ್ನಡ ಮನಸ್ಸುಗಳ ತಂತ್ರಜ್ಞಾನ ಸಂಬಂಧಿತ ಕುತೂಹಲವನ್ನು ತಣಿಸುತ್ತದೆ. ವಿಜ್ಞಾನ-ತಂತ್ರಜ್ಞಾನ ಲೋಕದಲ್ಲಿ ತಮ್ಮ ಬರವಣಿಗೆಯ ಮೂಲಕ ಚಿರಪರಿಚಿತರಾಗಿರುವ ಸುಧೀಂದ್ರ ಹಾಲ್ದೊಡ್ಡೇರಿ ಅವರೇ ಹೇಳಿರುವಂತೆ, 'ಇಂದಿನ ಯುವ ಪೀಳಿಗೆ, ಈಗಷ್ಟೇ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ಮುಗಿಸಿ ನಗರಕ್ಕೆ ಕಾಲಿಟ್ಟವರಿಗೆ ಕಣ್ಣಿಗೆ ಕಾಣುವುದೆಲ್ಲವೂ ಬೆರಗಿನಂತಿರುತ್ತದೆ. ಕೈಯಲ್ಲೊಂದು ಸ್ಮಾರ್ಟ್‌ಫೋನ್‌ ಇದ್ದರೂ ಆರ್‌ಎಫ್‌ಐಡಿ, ಕ್ಯೂಆರ್‌ ಕೋಡ್‌, ಎಲ್‌ಇಡಿ, ಪೆನ್ನು, ಕಾಗದ, ಅಷ್ಟೇ ಏಕೆ ಇಡೀ ನಗರವೇ ಸ್ಮಾರ್ಟ್‌ ಆಗಿರುತ್ತದೆ, ಜತೆಗೆ ಇ-ಕಸ... ಇವೆಲ್ಲವೂ ಅವರ ತಲೆಯೊಳಗೆ ಸಮುದ್ರ ಮಥನ ನಡೆಸುತ್ತಿರುತ್ತದೆ. ಅಂಥ ಓದುಗರಿಗೆ ತಿಳಿಗನ್ನಡದಲ್ಲಿ ಆಪ್ತಶೈಲಿಯಲ್ಲಿ ಶ್ರೀನಿಧಿ ಅವರು ತಂತ್ರಜ್ಞಾನದ ಕೌತುಕಗಳನ್ನು ಜಾಣ್ಮೆಯಿಂದ ವಿವರಿಸಿದ್ದಾರೆ.'

ನಮ್ಮನ್ನು ಕಂಪ್ಯೂಟರುಗಳು ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸ್ಮಾರ್ಟ್‌ ಟಿವಿ, ವಿಆರ್‌ ಹೆಡ್‌ಸೆಟ್‌, ತ್ರೀಡಿ ಮುದ್ರಣ, ಮೀಡಿಯಾ ಸ್ಟ್ರೀಮಿಂಗ್‌, ಗೂಗಲ್‌ ಕಾರ್ಡ್‌ಬೋರ್ಡ್‌... ಹೀಗೆ ಆಧುನಿಕ ತಂತ್ರಜ್ಞಾನದ ಮಜಲುಗಳನ್ನು ತೆರೆದಿಡುವ ಈ ಹೊತ್ತಗೆ ಜತೆಗಿದ್ದರೆ ನಾವೂ ಅಪ್‌ಡೇಟ್‌ ಆದಂತಾಗುತ್ತದೆ.

-ಅವಿನಾಶ್ ಬಿ.

ವಿಜಯ ಕರ್ನಾಟಕ ಜಾಲತಾಣದಲ್ಲಿ ಈ ಲೇಖನ ಪ್ರಕಟವಾಗಿರುವ ಪುಟ ಇಲ್ಲಿದೆ: http://vijaykarnataka.indiatimes.com/business/technology/text-book-it-is-a-tech-book/articleshow/52059813.cms

0 comments:

Post a Comment