'ಟೆಕ್ ಬುಕ್!' ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Tuesday, May 10, 2016

ವಿಜಯವಾಣಿ ಪರಿಚಯ: ‘ಲೋಕಲೈಸ್ಡ್’ #ಟೆಕ್​ಬುಕ್!

ಪತ್ರಿಕೋದ್ಯಮ ಪಾಠ ಹೇಳುವಾಗ ಉಪನ್ಯಾಸಕರು ಬೋಧಿಸುವ ಬಹುಮುಖ್ಯ ಅಂಶವೊಂದಿದೆ- ‘Proximity’ ಅಂತಾರೆ ಅದಕ್ಕೆ. ದೇಶ, ಕಾಲಮಾನಕ್ಕೆ ಸಮೀಪವಾದುದಾಗಿರಬೇಕು ಎಂಬುದು ಇದರ ಅರ್ಥ. ಓದುವುದಕ್ಕೆಂದು ‘ಟೆಕ್​ಬುಕ್’ ಅನ್ನು ಕೈಗೆತ್ತಿಕೊಂಡು ಓದಲಾರಂಭಿಸಿದಾಗ ಮೊದಲು ಮನಸ್ಸಿಗೆ ಬಂದ ವಿಚಾರ ಇದು. ಮೈಸೂರು ಪಾಕ್, ಮಸಾಲೆ ದೋಸೆ, ಫಿಲ್ಟರ್​ಕಾಫಿ, ಬೆಂಗಳೂರು ಮುಂತಾದ ಪದಗಳನ್ನು ಓದಿದಾಗ ಈ ಟೆಕ್ಸ್ಟ್ಬುಕ್ ಅಲ್ಲಲ್ಲ.. ‘ಟೆಕ್​ಬುಕ್’ ಕಬ್ಬಿಣದ ಕಡಲೆ ಅಲ್ಲ ಎಂಬುದು ಮನವರಿಕೆಯಾದೀತು. ಸರಳ, ಸುಂದರ ನಿರೂಪಣೆಯ ಮೂಲಕ ನಿತ್ಯ ಬದುಕಿನೊಳಗೆ ಹಾಸುಹೊಕ್ಕಿರುವ ಮತ್ತು ಭವಿಷ್ಯದಲ್ಲಿ ಹೊಕ್ಕಲಿರುವ ತಂತ್ರಜ್ಞಾನಗಳ ವಿವರವನ್ನು ಈ ಪುಸ್ತಕದ ಮೂಲಕ ಲೇಖಕ ಟಿ.ಜಿ.ಶ್ರೀನಿಧಿಯವರು ನೀಡಿದ್ದಾರೆ.

‘ಹ್ಯಾಶ್​ಟ್ಯಾಗ್ ಹೇಳುವ ಕತೆ’ ಎಂಬ ಶೀರ್ಷಿಕೆಯ ಲೇಖನ ಓದುತ್ತಿರಬೇಕಾದರೆ ಇದೇ ಹ್ಯಾಶ್​ಟ್ಯಾಗ್ ಬಗ್ಗೆ ವಾಟ್ಸ್​ಆಪ್​ನ ಗ್ರೂಪ್ ಒಂದರಲ್ಲಿ ನಡೆದ ಚರ್ಚೆಯ ಅಂಶಗಳು ನೆನಪಾಯಿತು. ಟ್ವಿಟರ್ ಅಥವಾ ಫೇಸ್​ಬುಕ್​ಗಳಲ್ಲಿ ಯಾವುದೇ ಸಂದೇಶ ಟೈಪಿಸುವಾಗ ಹ್ಯಾಶ್​ಟ್ಯಾಗ್ ಯಾಕೆ ಬಳಸಬೇಕು? ಬಳಸದಿದ್ದರೆ ಏನಾಗತ್ತೆ? ಟ್ರೆಂಡಿಂಗ್​ನಲ್ಲಿ ಆ ವಿಷಯಗಳು ಹೈಲೈಟ್ ಆಗುವುದಿಲ್ಲವೆ? ಎಂಬಿತ್ಯಾದಿ ಪ್ರಶ್ನೆಗಳು ಅಲ್ಲಿ ಎದುರಾಗಿದ್ದನ್ನು ಗಮನಿಸಿದ್ದೆ. ಈ ಲೇಖನದಲ್ಲಿ ಹ್ಯಾಶ್​ಟ್ಯಾಗ್ ಹೇಗೆ ಸಹಕಾರಿ, ಹ್ಯಾಶ್​ಟ್ಯಾಗ್ ಚಿಹ್ನೆ ಬಳಕೆಯ ಹಿನ್ನೆಲೆ, ಇತಿಹಾಸ, ಈ ಚಿಹ್ನೆಯ ಪರಿಣಾಮಕಾರಿ ಬಳಕೆಗೆ ಒಂದಿಷ್ಟು ಸೂತ್ರಗಳು ಇವೆಲ್ಲವನ್ನೂ ಬಹಳ ಸರಳವಾಗಿ ಮನಮುಟ್ಟುವಂತೆ ನಿರೂಪಿಸಲಾಗಿದೆ.

ಇದಲ್ಲದೇ, ‘ಕಂಪ್ಯೂಟರಿನ ರೂಪಾಂತರ ಪರ್ವ’ ಎಂಬ ಅಧ್ಯಾಯವಂತೂ ವೇಗವಾಗಿ ಬದಲಾಗುತ್ತಿರುವ ಜಗತ್ತಿನ ಸಂಕೇತವೋ ಎಂಬಂತೆ ಇದೆ. ಬಹುತೇಕ ಪ್ರತಿಯೊಂದು ಬದಲಾವಣೆಯನ್ನೂ ಲೇಖಕರು ಸೂಕ್ಷ್ಮವಾಗಿ ಗಮನಿಸಿ ಅದನ್ನು ಇಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಕನ್ನಡದ ಓದುಗರಿಗೆ ‘ಕಂಪ್ಯೂಟರ್ ಕುಟುಂಬ’ದ ಪ್ರಮುಖ ಸದಸ್ಯರ ಪರಿಚಯವನ್ನೇ ಅವರು ಮಾಡಿಕೊಟ್ಟಿದ್ದಾರೆ. ಇದಲ್ಲದೇ, ಕೆಲವು ವರ್ಷಗಳ ಹಿಂದೆ ಕಂಪ್ಯೂಟರ್, ಲ್ಯಾಪ್​ಟಾಪ್​ಗಳಲ್ಲಷ್ಟೇ ಬಳಕೆಯಲ್ಲಿದ್ದ ಯುಎಸ್​ಬಿ ಕೇಬಲ್ ಇಂದು ಯಾವ ರೀತಿ ಸರ್ವಾಂತರ್ಯಾಮಿಯಾಗಿ ಬದಲಾವಣೆ ಕಂಡಿದೆ. ಈ ಪರಿವರ್ತನೆಯಿಂದಾದ ಪ್ರಯೋಜನವನ್ನೂ ಅಂದರೆ ಮೊಬೈಲ್ ಚಾರ್ಜಿಂಗ್​ನಿಂದ ಹಿಡಿದು ಪಿಸಿಗೆ ಕನೆಕ್ಟ್ ಮಾಡುವ ತನಕ ಇರುವ ಎಲ್ಲ ಉಪಯೋಗಗಳನ್ನೂ ಅಂದವಾಗಿ ವಿವರಿಸಿದ್ದಾರೆ.

ಈ ಪುಸ್ತಕದಲ್ಲಿ 20 ಅಧ್ಯಾಯಗಳಿದ್ದು, ತ್ರೀಡಿ ಪ್ರಿಂಟಿಂಗ್ ಅರ್ಥಾತ್ ಮುದ್ರಣದ ಮೂರನೇ ಆಯಾಮದಿಂದ ಹಿಡಿದು, ಇ-ಕಸ, ಯಂತ್ರಮಾನವ, ಎಮೋಜಿ ಎಂದು ಕರೆಯಲ್ಪಡುವ ಡಿಜಿಟಲ್ ಲೋಕದ ಅಳು-ನಗು, ಕ್ರಿಕೆಟ್ ಅಂಗಣದಲ್ಲಿ ತಂತ್ರಜ್ಞಾನ ಮುಂತಾದ ವಿಷಯಗಳ ಕುರಿತು ಮಾಹಿತಿ ಇದೆ. ಕೊನೆಯ ಎರಡು ಅಧ್ಯಾಯದಲ್ಲಿ ಸಂದರ್ಭ ಸೂಚಿ, ಪದಪರಿಚಯಗಳಿವೆ.

ಒಟ್ಟಾರೆ ಹೇಳಬೇಕು ಅಂದರೆ, ಹಿರಿಯ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿಯವರು ಈ ಪುಸ್ತಕದ ಮುನ್ನಡಿಯಲ್ಲಿ ಹೇಳಿರುವಂತೆ,‘ ಇಂದಿನ ಯುವ ಪೀಳಿಗೆಗೆ, ಈಗಷ್ಟೇ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ಮುಗಿಸಿ ನಗರಕ್ಕೆ ಕಾಲಿಟ್ಟವರಿಗೆ ಕಣ್ಣಿಗೆ ಕಾಣುವುದೆಲ್ಲವೂ ಬೆರಗಿನಂತಿರುತ್ತದೆ. ಅಕ್ಷರಶಃ ಅರಗಿನ ಅರಮನೆ ಹೊಕ್ಕ ಅನುಭವವಾಗುತ್ತದೆ. ಕೈಯಲ್ಲೊಂದು ಸ್ಮಾರ್ಟ್​ಫೋನ್ ಇಟ್ಟುಕೊಂಡರೂ, ಆರ್​ಎಫ್​ಡಿ, ಕ್ಯೂಆರ್ ಕೋಡ್ ಮುಂತಾದ ವಿಷಯಗಳು ಅವರ ತಲೆಯೊಳಗೆ ಸಮುದ್ರ ಮಥನವನ್ನೇ ಸೃಷ್ಟಿಸಿರುತ್ತದೆ. ಅಂಥವರಿಗಾಗಿ ತಿಳಿಗನ್ನಡದಲ್ಲಿ ಅತ್ಯಂತ ಆಪ್ತಶೈಲಿಯಲ್ಲಿ ತಂತ್ರಜ್ಞಾನದ ಕೌತುಕಗಳನ್ನು ಈ ಪುಸ್ತಕದ ಮೂಲಕ ಶ್ರೀನಿಧಿ ತಿಳಿಯಪಡಿಸಿದ್ದಾರೆ’.

-ಉಮೇಶ್‌ಕುಮಾರ್ ಶಿಮ್ಲಡ್ಕ

ವಿಜಯವಾಣಿ ಜಾಲತಾಣದಲ್ಲಿ ಈ ಲೇಖನ ಪ್ರಕಟವಾಗಿರುವ ಪುಟ ಇಲ್ಲಿದೆ: http://vijayavani.net/?p=1774986

0 comments:

Post a Comment